Feeds:
Posts
ಟಿಪ್ಪಣಿಗಳು

ಮರೆತ ಕವನ

ಕವಿತೆ ಕವಿತೆ ನನಗೊಂದು ಗುಟ್ಟು ಹೇಳುವೆಯಾ?

ನಂಬಿಕೆಗೆ ಬೆಲೆ ಕಟ್ಟುವೆಯಾ

ಜೀವನಕೆ ನಾಂದಿ ಹಾಡುವೆಯಾ

ಮನಸಿನ ಬೇನೆ ಮಾಸಿಸುವೆಯಾ ||೧||

 

 

ಕವಿತೆ ಕವಿತೆ ನೀನು ಎಲ್ಲಿ ಹೋದೆ?

ಹುಡುಕಾಡಿ ನಿದ್ದೆ ಹೋದೆಯಾ

ಬೇನೆಯಲಿ ಬೆಂದು ಹೋದೆಯ

ಬಯಸಿ ಬಯಸಿ ಸೋತು ಹೋದೆಯಾ ||೨||

 

 

ಕವಿತೆ ಕವಿತೆ ನಾ ಎಲ್ಲಿ ತೊಡಗಲಿ?

ಮನಸಲಿ ಬಂದಿಸಿಡಲೇ

ನಗಲೇ, ಅಳಲೇ, ಕಣ್ಣೀರಿಡಲೇ,

ನೀ ಬೇಗ ಹೇಳು, ಹೇಳು, ಹೇಳು…. |೩|

Advertisements

ಬರೇ ಇಂದು

೧. ಆಸೆಯೇ ಸುಖಕ್ಕೆ ಮೂಲ. ದುರಾಸೆಯೇ ದುಃಖಕ್ಕೆ ಮೂಲ.

೨. ಆನೆ, ಅಡಿಕೆ ಕದ್ದರೆ ಬಂದೀಖಾನೆ. ಮನಸು, ಹೃದಯ ಕದ್ದರೆ ಸಂಸಾರವೆಂಬ ಬಂದೀಖಾನೆ.

೩. ಕಡಲಿಗೆ ತೀರದ ತೆಂಗಿನ ಮರವೇರುವ ಆಸೆ. ಪ್ರಾಣ ಸ್ನೇಹಿತನಾದ ಗಾಳಿಯಲ್ಲಿ ದಿನವೂ ಹೇಳುವುದೊಂದೇ, ಒಮ್ಮೆ ತಲುಪಿಸಿಬಿಡು.

೪. ಹುಡುಗಿಯೆಂದರೆ ಮಳೆಯಂತೆ. ಸುರಿಯುವ ಮುನ್ನ ಗುಡುಗು, ಸಿಡಿಲು ಗ್ಯಾರಂಟಿ.

೫. ಅಂದಿನ ಮದುವೆ ಒಂದು ವಾಕ್ಯದಲಿ ಅನ್ನೋದಾದ್ರೆ – ಕದ್ದು ಕದ್ದು ನೋಡಬೇಕೆನಿಸುತಿದೆ. ಕುಡಿಮೀಸೆಯ ನೋಟಕೆ ತಲೆಬಾಗಿದೆ.

೬. ನೀನು ನನ್ನವಳಾದರೆ ನನ್ನ ಬಾಳು ಹಾಲು ಸಕ್ಕರೆ. ಇಲ್ಲದಿದ್ರೆ ಹಾಳು ಸಕ್ಕರೆ.

೭. ನಾನು, ನನ್ನದು, ನನ್ನಿಂದ ಎನ್ನುವುದನ್ನು ಬಿಡಿ. ನಾವು, ನಮ್ಮದು, ನಮ್ಮಿಂದ ಎಂದು ಸಂತೋಷ ಪಡಿ.

೮. ನನ್ನ ಮನಸು ನಿನ್ನ ಮನಸಿಗಂದಿತು ಒಮ್ಮೆ ಸನಿಹ ಬಂದು ಬಿಡು. ನಿನ್ನ ಮನಸುತ್ತರಿಸಿತು ನಾನು ಇಂದಿನಿಂದ ಕುರುಡು.

೯. ಕದಿಯಲಾಗದ, ಕೊಟ್ಟಷ್ಟು ಅಧಿಕವಾಗುವ, ಕೊನೆಯವರೆಗೆ ಒಳಿಯುವ ಸಾಧನವು ಒಂದೇ ಇರೋದು ಪ್ರಪಂಚದಲ್ಲಿ – ವಿದ್ಯೆ.

೧೦. ಸಾವಿನ ನಂತರ ಏನಾಗುತ್ತೆ ಅನ್ನೋ ಪ್ರಶ್ನೆಗೆ ಉತ್ತರವೇ ಬದುಕು?

ಗುರಿ

ಜೀವನ ಸುಂದರ ಅನುಭವ ಪುಟ
ಚಿಂತಿಸಿ ಮನಸು ಕರಡಾಗಿದೆ ದಿಟ
ಮಾತೃಭಾಷೆಯ ಭಾವನೆಗಳ ಪುಳಕ
ತಿಂಗಳ ತುಂತುರು ಹನಿಗಳ ಜಳಕ ||೧||

ನಕ್ಷತ್ರಗಳೊಳಗಿನ ಬೆಳಕಿನ ಚಿಹ್ನೆ
ವರುಷದ ತ್ಯಾಗದ ತತ್ವದ ಸನ್ನೆ
ಕನಸು ಮುಂಜಾನೆಯ ಬನ್ನಿ ಮಂಟಪ
ಹಾದಿ ಉಬ್ಬರದ ಕಡಿದಾದ ಸಂಕಟ ||೨||

ರೋಮಾಂಚಿಸಿದ ಸಂಪೂರ್ಣತೆಗೆ
ಹಾಡು ಹಾಡಿಸಿದ ಮನಸಿಗೆ
ಕವಿತೆಯ ವಿಚಿತ್ರ ವೇಷದ ಒಳಗೆ
ಪೂರ್ಣ ವಿರಾಮ ಹಾಕಲಾರೆ ನಿಜ ||೩||

ಭಾವನೆಗಳೊಳಗಿನ ಹಾದಿರ ಚಂದ್ರ
ಮೀಟಲಾರೆನು ನಾ ವೀಣೆಯ ದಾರ
ಹುಟ್ಟು ಸಾವಿನ ಬೆಟ್ಟದ ನಡುವೆ
ಕಣಿವೆಯ ಕೊರೆಯುವೆ ನಿನ್ನ ಪಡೆವೆ ||೪||

ವಿರಹ

ಜೀವದ ಮೇಲೇರಿ ನಿಂತ ಬಾನು
ಹುಡುಕಾಡಿ ನಿದ್ದೆ ಹೋದ ಮಾತು
ಬೆಸೆದುಕೊಂಡಿತೇ ಪ್ರೀತಿ ||೧||

ಎಲ್ಲೆಲ್ಲೋ ಮರೆಯಾಗುವ ನಿನ್ನುಸಿರು
ಎಡೆಬಿಡದೆ ಕಾಡುವ ನನ್ನುಸಿರು
ಅತ್ತು ಮರೆಯಾಯಿತೇ ಶೃತಿ ||೨||

ಬೆಂಬಿಡದೆ ಕಾಡುವ ನಿನ್ನ ಕಿಚ್ಚು
ನನ್ನಯ ಮನಸಿನೊಳಗಿನ ಹುಚ್ಚು
ಮುಂದುವರಿಸಲೇ ಕ್ರಾಂತಿ ||೩||

ಏನೋ ಮಾಡಬೇಕೆಂಬ ಹಂಬಲ
ಹಿಂದಿನಂತಿಲ್ಲದ ನಿನ್ನ ಬೆಂಬಲ
ಸರಿಯಾಗಿತಲ್ಲವೇ ಬ್ರಾಂತಿ ||೪||

೧. ಜಗತ್ತೆಲ್ಲಾ ಸುತ್ತಬೇಕೆಂದುಕೊಂಡ ಬುದ್ದಿವಂತ ಆಗಸಕ್ಕೆಬಳ್ಳಿ ಕಟ್ಟಿ ನೇತಾಡಿದನಂತೆ. ಹೇಗೂ ಭೂಮಿ ತಿರುಗುತ್ತದಲ್ಲ.

೨. ಜೀವನವೆಂದರೆ ಜೀ-ವನ (ಮನಸಿನ ಕಾಡು ,ಜೀ ಅಂದರೆ ಮನಸು ಎಂದರ್ಥ ಹಿಂದಿಯಲ್ಲಿ) ವೋ, ಅಲ್ಲ ಜೀವ-ನ(ಜೀವವಿಲ್ಲದಿರುವುದು)ವೋ?

೩. ಊರಲ್ಲಿರುವ ಮಕ್ಕಳೆಲ್ಲರ ಜಾತಕ ಬರೆದ ಜ್ಯೋತಿಷಿ ತನ್ನ ಮಗನ ಜಾತಕ ಬರೆಸಲು ಪಕ್ಕದೂರಿಗೆ ಹೊರಟನಂತೆ.

೪. ಬೆಳ್ಳಗಿರುವುದೆಲ್ಲಾ ಹಾಲಲ್ಲ. ಕೆಲವೊಮ್ಮೆ ಮಜ್ಜಿಗೆಯೋ, ಸುಣ್ಣದ ನೀರೋ ಆಗಿರಬಹುದು.

೫. ಸಮಾಜಕ್ಕೆ, ದೇಶಕ್ಕೆ, ಜಾತಿಗೆ ಹೆದರದವನು ಚಿಕ್ಕ ಮನಸಿಗೆ ಹೆದರಿದನಂತೆ.

೬. ದಣಿದು ಬಂದ ಗಂಡನಿಗೆ, ಹೆಂಡತಿಯ ಸಿಡುಕಿನ ಬೈಗುಳ ಕೇಳಿದಾಗ ಮದುವೆಗೆ ಸಾಕ್ಷಿಯಾದ ಅಗ್ನಿಯ ನೆನಪಾಯಿತು.

೭. ರಾತ್ರಿ ನಿದ್ದೆ ಬರದೆ ಹಗಲಲ್ಲಿ ಮಲಗಿದಾಗ ಕಾಣುವುದೇ ಹಗಲುಕನಸು?

೮. ಅಕ್ಷರಕ್ರಾಂತಿ, ಧವಳಕ್ರಾಂತಿ, ಆಹಾರಕ್ರಾಂತಿ ಮಾಡ ಹೊರಟವನಿಗೆ ಮನೆಯಲ್ಲಿನ ತನ್ನೊಡತಿಯ ಕ್ರಾಂತಿಗೆ ಉತ್ತರ ಸಿಗಲಿಲ್ಲವಂತೆ.

೯. ಬದುಕೊಂದು ಸಿನೆಮಾದಂತೆ ನಿನಗೆ ನೀನೇ ನಾಯಕ. ಉಳಿದವರೆಲ್ಲರು ಖಳನಾಯಕರು, ಪೋಷಕನಟರು.

೧೦. ಇಷ್ಟವಿಲ್ಲದೇ ಬಲವಂತಕೆ ಮದುವೆಯಾಗುವವನಿಗೆ ಹೂಮಾಲೆ ಯಮನ ಶೂಲದಂತೆಯೂ, ಮೃಷ್ಟಾನ್ನದೂಟ ತಿಥಿಯೂಟದಂತೆಯೂ ತೋರಿತು.

ಮಾತು

ನೆನಪಿನ ದೋಣಿಯಲಿ
ಕೈ ಜಾರಿದ ಕನಸುಗಳು
ಬತ್ತಿದ ನದಿಗೆ
ಸಾಕ್ಷಿಗಳಾದವು ||೧||

      ಮನಸಿನಳುವುದು
      ಜಗದಲಿ ನಗುವುದು
      ನನ್ನ ಎದೆಗೆ
      ದಿನಚರಿಗಳಾದವು ||೨||

ಸತ್ಯವಿಲ್ಲದ ಜಗದಲಿ
ಮಿಥ್ಯವಿನಿಸಿಕೊಳ್ಳಲು
ಮನಸ್ಸಿನ ಬದಿ
ಹಾತೊರೆಯತೊಡಗಿತು ||೩||

ಕನಸು

ನಿನ್ನ ನೆನಪಾಗುತಿದೆ
ಮತ್ತೆ ಮತ್ತೆ
ಮಧ್ಯ ದಾರಿಯಲಿ ನೀರಡಿಕೆಯೋ
ಅಲ್ಲ ಪರೀಕ್ಷೆಯೋ
ನಾನರಿಯೆ  ||೧||

ಬಯಸಿದ್ದೆಲ್ಲಾ ಸಿಗುವುದೋ
ಸಿಕ್ಕಿದ್ದೆಲ್ಲಾ ಬಯಸಿದ್ದೋ
ಅಲ್ಲ ಬಯಸಿ
ಸಿಗುವುದೋ
ನಾನರಿಯೆ  ||೨||


ನನ್ನೆದೆಯ ಗೂಡಲ್ಲಿ
ಬತ್ತಿದ ಕಾರಂಜಿಯೋ
ಅಲ್ಲ ಚಿಗುರಿದ
ಕನಸೋ
ನಾನರಿಯೆ ||೩||


ಇಷ್ಟದ ಮನಸ್ಸನ್ನು
ಇಷ್ಟವಿಲ್ಲವೆಂದೋ
ಅಲ್ಲ ಇಷ್ಟವಿಲ್ಲದೆ
ಇಷ್ಟವೆಂದೋ
ನಾನರಿಯೆ ||೪||


ಯಾಂತ್ರಿಕ ಜಗದಲಿ
ಇದು ಪಾಠವೋ
ಅಲ್ಲ ಕೊನೆಯ
ನೇಣುಗಂಬವೋ
ನಾನರಿಯೆ ||೫||


ಆದದ್ದು ಒಳ್ಳೆದಕ್ಕೋ
ಆಗುವುದು ಒಳ್ಳೆದಕ್ಕೋ
ಅಲ್ಲ ಆಗದಿರುವುದು
ಒಳ್ಳೆದಕ್ಕೋ
ನಾನರಿಯೆ ||೬||